✍✍ಶೇಖರ ಚಿತ್ರಾಪು
ಸುಮಾರು ಐದು ಮಿಲಿಯ ವರ್ಷಗಳ ಕೆಳಗೆ ಭೂಮಿಯ ಮೇಲೆ ಮಾನವ ಜೀವಿಯ ಉತ್ಕ್ರಾಂತಿಯಾಗಿ, ಅಂದಿನಿಂದ ಈಗಿನ ಆಧುನಿಕ ಮನುಜತನಕದ ದೀರ್ಘ ಇತಿಹಾಸದಲ್ಲಿ- ಬೌದ್ದಿಕವಾಗಿ ಅಥವಾ ಶಾರೀರಿಕವಾಗಿ ಅವನನ್ನು ಯಾರೂಬಎಂದೂ ಮೀರಿಸಿಲ್ಲ. ಸವಾಲೆಸೆದಿಲ್ಲ. ಅಡಿಯಾಳಾಗಿಸಿ ದರ್ಪದಿಂದ ಆಳಿಲ್ಲ. ಭೂಮ್ಯಾಕಾಶಕೆ ಅವನು ಅನಭಿಷಿಕ್ತ ದೊರೆ. ದೊರೆಯೇನು, ಏಕಚಕ್ರಾಧಿಪತಿ!
ಹಿಂಸ್ರ ಕಾಡು ಪ್ರಾಣಿಗಳನ್ನಾತ ಭೇಟೆಯಾಡಿ ಕೊಂದ, ತಿಂದ. ಪ್ಲೇಗ್ ಕೊಲೆರಾ ಕೊರೊನಾ ಮುಂತಾತ ವಿಷಯುಕ್ತ ಸೂಕ್ಷ್ಮ ಜೀವಾಣುಗಳನ್ನು ಎದುರಿಸಿ ಪಳಗಿಸಿದ. ಸಮುದ್ರನ ರೌದ್ರವನ್ನೂ ಎದುರಿಸಿ ಬದುಕಿದ. ಶತ್ರುಗಳೇ ಇಲ್ಲದ ಅಖಂಡ ಸಾರ್ವಭೌಮನೆನಿಸಿದ. ಆದರೀಗ, ಈ ಹೊತ್ತು ಸಂಶೋಧಕ ವಿಜ್ಞಾನಾಚಾರ್ಯರು ನುಡಿದಿರುವ ಭವಿಷ್ಯದಂತೆ ಭೂಮಿ-ಆಕಾಶಗಳಲ್ಲಿ ನಾವು ಮಾನವರು ಇಷ್ಟುದಿನವೂ ಸಾಠಿಯಿಲ್ಲದೆ ಮೆರೆದಾಡಿಬಂದ ಆಖಂಡ ಭೋಗಭಾಗ್ಯಗಳು ಈ ಶತಮಾನಕ್ಕೆ ಅಂತ್ಯವಾಗುವವು, ಅಂದರೆ ಕ್ರಿಶ. 2100ಕ್ಕೆ ಮೊದಲು! ಇದರಲ್ಲಿ ಎರಡು ಬಗೆಯ ಮಹಾನ್ ಕುತ್ತುಗಳಿರಲಿದ್ದು, ಎರಡರಲ್ಲಿ ಒಂದು ಭೂಮಿಯಲ್ಲೇ ಇನ್ನು ಹತ್ತೈವತ್ತು ವರ್ಷಗಳಲ್ಲಿ, ಮತ್ತೊಂದು ಮುಂದೆ, ಪರಗ್ರಹಗಳಿಂದ!!
ಅವು ಹೀಗೆ;
ಯಂತ್ರಮಾನವ ನಮಗೆ ಗೊತ್ತು. ಮನುಜನಂತೆ ಅದು ಕೆಲಸಕಾರ್ಯಗಳನ್ನು ನಿರ್ವಹಿಸಲಾರಂಭಿಸಿದುದೂ ಗೊತ್ತು. ಆದರೆ, ವಿಜ್ಞಾನ ಜಗತ್ತಿನಲ್ಲಿ ವಿಜ್ಞಾನಿಗಳ ಹೇಳಿಕೆಗಳಿಂದ ಈಚೀಚೆಗೆಆತಂಕದ ಗುಲ್ಲೆದ್ದಿರುವಂತೆ, 2045ರ ವೇಳೆಗೆ AI'ಕೃತಕ ಬುದ್ದಿಮತ್ತೆ'ಯ ಸಹಾಯದಿಂದ ಮಹಾನ್ ಪ್ರಾವಿಣ್ಯ ಶಕ್ತಿಯನ್ನು ದೊರಕಿಸಿಕೊಳ್ಳುವ ವಿಶೇಷ 'ಯಂತ್ರಮಾನವ' ಎಲ್ಲಾ ಮತ್ತು ಎಲ್ಲಾ ಕ್ಷೇತ್ರಗಳಲ್ಲೂ ಮನುಷ್ಯನಿಗಿಂತ ಎಷ್ಟೋ ಪಟ್ಟು ಅಧಿಕ ಕ್ಷಮತೆಯಿಂದ ಮನುಜನೆಲ್ಲಾ ಕೆಲಸಕಾರ್ಯಗಳನ್ನು ನೂರು ಪಟ್ಟು ಖಾತರಿಯಿಂದ ಮಾಡಬಲ್ಲನಂತೆ! ಅಬ್ಬಬ್ಬಾ...! ಒಂದ್ನಿಮಿಷ ಕಣ್ಮುಚ್ಚಿ ವಿಚಾರ ಮಾಡೋಣ, ಮಂಡೆಯಲ್ಲೆಲ್ಲ ಇರುವೆಯಂತಹ ಪಿಪೀಲಿಕೆಗಳು ಓಡಾಡಹತ್ತಿ ಗುಂಗೇರುತ್ತದೆ! ಈಗಾಗಲೇ ವಿಜ್ಞಾನದ ಸಂಶೋಧನೆಗಳಿಂದ ಕೆಲವಿಲ್ಲದಂತಾಗಿ ಮನುಷ್ಯ ಆಲಸಿಯಾಗಿದ್ದಾನೆ. ಈಗ ಈ 'ಮಾನವ' ಬಂದನೆಂದರೆ ನಮಗೆಲ್ಲ ಏನು ಕೆಲಸವಿದೆ?
ನಾವು ಗುಜರಿಯಾಗಿ ಮೂಲೆಗುಂಪಾದೇವೇ? ಖಂಡಿತ ಸಾಧ್ಯ!
ಎರಡನೇಯದು, ಎಲಿಯನ್ಸ್....
ನಮ್ಮ ಭೂಮಿಯನ್ನುಳಿದು ಇತರ ಪರಗ್ರಹಗಳಲ್ಲಿ ಮಾನವನಂತೆ ಸಜೀವಸೃಷ್ಟಿಗಳೇನಾದರೂ ಇದೆಯೇ ಅನ್ನುವ ಮಹತ್ವಾಕಾಂಕ್ಷೆಯ ಶಂಕೆ, ಊಹೆಗಳು ಮತ್ತು ಅದಕ್ಕಾಗಿನ ಶೋಧಗಳಲ್ಲಿ ಮಾನವ ಸತತವಾಗಿ ನಿರತನಿದ್ದಾನೆ. ಅದವನ ಪರಜೀವಶೋಧದ ಸ್ವಪ್ನವೂ ಹೌದು. ಮಹಾಬ್ರಹ್ಮಾಂಡದ ಅನಂತ ಅವಕಾಶದಲ್ಲಿ ಭೂಮಿಯಂತಿರು ಮತ್ತೊಂದು ಗ್ರಹವಿದೆಯೇ ಎಂದು ಈತನಕವೂ ಖಗೋಳಶಾಸ್ತ್ರಿ ವಿಜ್ಞಾನಿಗಳ ಮೆದುಳನ್ನು ಕೊರೆಯುತ್ತಿದ್ದ ಪ್ರಶ್ನೆಗಳು ಈಚಿನ ಒಂದೆರಡು ದಶಕಗಳಲ್ಲಿ, 'ಹೌದು, ಇರುವ ಸಾಧ್ಯತೆಗಳಿವೆ' ಎಂಬ ಆಶಾದಾಯಕ ಅಂಶಗಳು ಕಠಿಣ ಶೋಧಗಳಿಂದ ಕಂಡುಬಂದಿದೆ. ಅಲ್ಲಿನ ವಾತಾವರಣದ ತೇವಾಂಶ, ಗಾಳಿಯ ಸಾಂದ್ರತೆ, ಉಷ್ಣಾಂಶ, ಧೂಳಿನ ಕಣಗಳ ಘನತೆ ಇತ್ಯಾದಿ ಘಟಕಗಳ ಬಗೆಗೆ ಬಹು ಉತ್ಸಾಹದಿಂದ ಶೋಧಕೆಲಸಗಳು-ಅಧ್ಯಯನಗಳು ಆರಂಭವಾಗಿವೆ.
ಮುಂದೆ ಈ ಬಗೆಗೆ ನಿಖರವಾದ ಮಾಹಿತಿಯನ್ನು ಪಡೆಯುವುದು ಸಾಧ್ಯ ಅನ್ನುತ್ತಾರೆ ವಿಜ್ಞಾನಿಗಳು. ಎರಡೂವರೆ ಬಿಲಿಯನ್ ವರ್ಷಗಳ ಹಿಂದೆ ಮುಕ್ತ ಆಮ್ಲಜನಕ(ಈಗ ನಮ್ಮ ಉಸಿರಾಟದಲ್ಲಿ ಲಭ್ಯವಿರುವ ಆಕ್ಸಿಜನ್)ದ ಇರವು ಮತ್ತು ಸಹಾಯವಿಲ್ಲದಿದ್ದಾಗ, ಭೂಮಿಯಲ್ಲಿನ ಸೂರ್ಯಶಕ್ತಿ ಮತ್ತು ವಾತಾವರಣದ ಬಹು ಶಿಥಿಲ ತೇವಾಂಶಗಳನ್ನು ಸ್ವಯಂ ಆಗಿ ಪರಿವರ್ತಿಸಿಕೊಂಡು ಜೀವಿಸುತ್ತಿದ್ದ ಸೈನೋಬ್ಯಾಕ್ಟೀರಿಯಾ ಅನ್ನುವ ಅತ್ಯಂತ ಸೂಕ್ಮಜೀವಿಗಳ ಜೀವಸಿದ್ದಾಂತದ ಆಧಾರದಿಂದ - ಅಂತಹುದೇ ಸಾಧ್ಯತೆ ಅನ್ಯ ಗ್ರಹಗಳಲ್ಲೂ ಏಕಿರಬಾರದು ಎನ್ನುವ ಅರಿವಿನ ಹಸಿವು, ಆಶಾದಾಯಕ ನಿಲುವು ವಿಜ್ಞಾನಿಕರದ್ದು. ವರ್ಷಗಳ ಕೆಳಗೆ ಸ್ಪಷ್ಟವಾಗಿ ವಿಶ್ಲೇಷಣೆಗೆ ಸಿಗದ, ಊಹೆಗೆ ನಿಲುಕದ ಅನಂತ ಅವಕಾಶದ ನಮ್ಮ ನೆರೆಯ ಗ್ರಹಗಳ ಪ್ರದೇಶದಿಂದ ಭೂಮಿಗೆ ರೇಡಿಯೋ ಸಂದೇಶವೊಂದು ಬಂದಿದ್ದು, - ಆ ಸಂದೇಶವೇನಾದರೂ ಪರಗ್ರಹದಿಂದಲೇ ಬಂದಿರಬಹುದಾದ ಸಾಧ್ಯತೆಗಳಿವೇ? ಹಾಗೇನಾದರೂ ಇದ್ದರೆ ಅಲ್ಲಿ ಸಜೀವ ಸೃಷ್ಟಿಗಳಿದ್ದೀತಲ್ಲವೇ ಎಂಬ ಚರ್ಚೆಗೆ ರೌಚಿಕ ಕಚ್ಚಾವಸ್ತು ದೊರೆತಿದ್ದು ಕುತೂಹಲಕರ ನವ್ಯ ಶೋಧಗಳಿಗೀಗ ಮತ್ತೆ ಚಾಲನೆ ದೊರೆತಿದೆ. ನಮ್ಮ ಭೂಮಿಯಿಂದ 4.2 ಪ್ರಕಾಶವರ್ಷ (ಬೆಳಕು ಒಂದು ವರ್ಷ ಸಮಯದಲ್ಲಿ ಕ್ರಮಿಸುವ ದೂರ= ಒಂದು ಪ್ರಕಾಶವರ್ಷ) ದೂರದಲ್ಲಿರುವ ಪ್ರಾಕ್ಸಿಮಾ ಸೆಂಟೋರಿ (Proxima Centauri) ಅನ್ನುವ ಕೆಂಬಣ್ಣದ ಕುಬ್ಜಗ್ರಹವಿದ್ದು ಅದು ಅವಕಾಶದ ದಕ್ಷಿಣದೆಸೆಯ ತಾರಾಸಮೂಹಗಳಿಗೆ ಸೇರಿದೆ. ಭೂಮಿಗೆ ಹತ್ತಿರದ ತಾರೆಗಳ ಸುತ್ತ ಗಿರಕಿ ಹಾಕುವ ಗ್ರಹಗಳೇನಾದರೂ ಇವೆಯೇ ಮತ್ತು ಅಲ್ಲಿ ಸಜೀವ ಸೃಷ್ಟಿಯ ಶಕ್ಯತೆಗಳೇನು ಎಂಬ ಅಧ್ಯಯನದ ಬಗೆಗೆ ಇಪ್ಪತ್ತು ವರ್ಷದ ಹಿಂದೆಯೇ ಇಸವಿ 2000ದಿಂದ ಒಂದು ನಿರೀಕ್ಷಣಾ ದೃಷ್ಟಿಯನ್ನಿರಿಸಿದ್ದು 2016 ರ ವೇಳೆಗೆ ಮಾಡಿದ ಅನೇಕ ನಿರೀಕ್ಷಣಾ ಶೋಧಗಳಿಂದ ಭೂಮಿಗೆ ಹತ್ತಿರದ ತಾರೆಯ ಸುತ್ತ ತಿರುಗುತ್ತಿರುವ ನಮ್ಮ ಪ್ರೋಕ್ಸಿಮಾದ ಶೋಧ ಹಿಡಿಯಿತಲ್ಲದೆ 'ಪ್ರೋಕ್ಸಿಮಾ-ಬಿ' ಅನ್ನುವ ಭೂಮಿಗಿಂತ ಒಂದೂಕಾಲು ಪಟ್ಟು ದಪ್ಪಗಿನ ಮತ್ತೊಂದು ಗ್ರಹವು ಕೂಡಾ ಪರಿಭ್ರಮಿಸುವುದು ಕಂಡುಬಂತು. ತನ್ನ ನಿಕಟತಮ ತಾರೆಯಿಂದ ಸುಮಾರು 75 ಕೋಟಿ ಕಿ.ಮಿ ದೂರದ ಅಂತರದಲ್ಲಿ ಪ್ರದಕ್ಷಿಣೆ ಹಾಕುವ ಕಾರಣದಿಂದ ಈ ಗ್ರಹದಲ್ಲಿ ಸಜೀವಸೃಷ್ಟಿಯ ಶಕ್ಯತೆಗಳನ್ನು ವಿಜ್ಞಾನಿಗಳು ಮನಗಂಡಿದ್ದಾರೆ. ಆದರೆ, ಇಷ್ಟು ಸಾಕಾಗದು. ಆ ಬಗೆಗಿನ ನಿಖರತೆಗಾಗಿ ಈಗಿನ್ನೂ ಅನೇಕ ಅಂಶಗಳು ದೃಢಪಡುವದಿದೆ. ಈದೀಗೀಚೆಗೆ ಈ ತಾರಾವಲಯ ಮತ್ತೊಮ್ಮೆ ದೊಡ್ಡ ಹೊಸ ಚರ್ಚೆಗೆ ಕಾರಣವಾಗಿದೆ. ಕಾರಣ, ಅಲ್ಲಿನ ದಿಶೆಯಿಂದ ರೇಡಿಯೋ ಲಹರಿಯೊಂದು ಪ್ರಥ್ವಿಗೆ ಬಂದಿರುವುದನ್ನು ಖಗೋಲ ನಿರೀಕ್ಷಣಾ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.
ಆದ್ದರಿಂದ ಈ ರೇಡಿಯೋ ತರಂಗಗಳ ಸಂದೇಶ ಆ ದೆಸೆಯಲ್ಲಿದ್ದಿರಬಹದಾದ ಸಜೀವ ಸೃಷ್ಟಿಯ ಗ್ರಹವೊಂದರಿಂದ ಬಂದುದಾಗಿರಬಹುದೇ ಎಂಬ ಪುಳಕ ಮತ್ತು ಜಿಜ್ಞಾಸೆಯ ವರದಿಯನ್ನು ಪ್ರಥಮವಾಗಿ ಲಂಡನ್ ನ 'ಗಾರ್ಡಿಯನ್' ವರ್ತಮಾನಪತ್ರ ಬಿತ್ತರಿಸಿದೆ. ಆ ನಂತರ ಈ ವಿಷಯದ ಬಗ್ಗೆ 'ಸೈಂಟಿಫಿಕ್ ಅಮೆರಿಕನ್' ನಂತಹ ವಿಜ್ಞಾನ ನಿಯತಕಾಲಿಕೆಗಳೂ ಚರ್ಚೆ ಆರಂಭಿಸಿದವು. 2019ರ ಏಪ್ರಿಲ್-ಮೇ ಯಲ್ಲಿ ಆಸ್ಟ್ರೇಲಿಯಾದ 'ಪಾರ್ಕ್ಸ್ ಆಬ್ಸರ್ವೇಟರಿ' ವೀಕ್ಷಣಾಲಯ ದಲ್ಲಿರುವ ಪ್ರಚಂಡ ದೊಡ್ಡದಾದ ದುರ್ಬೀನಿನ ಸಹಾಯದಿಂದ ಈ ಕ್ಷೀಣ ಧ್ವನಿಸಂದೇಶದ ತರಂಗಗಳನ್ನು ಸೆರೆಹಿಡಿಯಲಾಯಿತು. ಪರಗ್ರಹಗಳಲ್ಲಿನ ಸಜೀವಸೃಷ್ಟಿಯ ಸಾಧ್ಯತೆಗಳ ಬಗೆಗೆ ಅಧ್ಯಯನ ನಡೆಸಲು ರಶ್ಯನ್ ಉದ್ಯೋಗಪತಿ ಯೂರಿ ಮಿಲ್ಟನ್ ಅವರ ಸಹಾಯ ನಿಧಿಯಿಂದ ಸ್ಥಾಪಿಸಿದ 'ಬ್ರೇಕ್ ಥ್ರೂ ಲಿಸ್ಟನ್' ಕಾರ್ಯಕ್ರಮಾಂತರ್ಗತ ಇಂತಹ ಅಧ್ಯಯನಗಳು ನಡೆಯುತ್ತಿರುತ್ತವೆ. ಇಲ್ಲಿ ಪರಗ್ರಹಗಳಿಂದ ಬರುವ ವಿವಿಧ ಸಂದೇಶಗಳನ್ನು ಗ್ರಹಣ ಮಾಡಿ ಅಭ್ಯಸಿಸಲಾಗುತ್ತದೆ. ಶೇನ್ ಸ್ಮಿಥ್ ಎಂಬ ವಿದ್ಯಾರ್ಥಿಗೆ ಒಮ್ಮೆ 982 ಮೆಗಾಹರ್ಟ್ಝ್ Megahertz ( ಸಂಕೇತಧ್ವಜ, ದ್ಯುತಿ ಧ್ವನಿತರಂಗಗಳನ್ನು ಗ್ರಹಿಸುವ ಅಳತೆ ಮಾನ. 1MHz = ಒಂದು ದಶಲಕ್ಷ ಹರ್ಟ್ಸ್ ಗಳು) ಶಕ್ತಿಯ ಸಂದೇಶ ಪ್ರಾಪ್ತವಾದಾದ, ಇದು ಅಂತರಾಳದ ಯಾವುದೋ ಸಜೀವಸೃಷ್ಟಿಗಳಿರಬಹುದಾದ ಗ್ರಹಪುಂಜದಿಂದ ಬಂದಿದ್ದಿರಬಹುದೆಂಬ ಬಲವಾದ ಸಂದೇಹಕ್ಕೆ ನಾಂದಿಯಾಯಿತು. ಒಂದಿಗೇ, ಭೂಮಿಯ ಮಾನವನ ಅಂತರಿಕ್ಷಯಾನಗಳ ಸಂದರ್ಭದಲ್ಲಿ ತಮ್ಮ ನೌಕೆಯಿಂದ ಆಕಸ್ಮಿಕವಾಗಿ ಕಳಚಿಬಿದ್ದ ಯಾ ಅಂತರಾಳದಲ್ಲಿ ತೂರಿಬಿಟ್ಟಿರಬಹುದಾದ ಅನಾವಶ್ಯಕ ಎಂದು ಕಂಡ ಗುಜರಿ ಯಂತ್ರಣಗಳಿಂದೇನಾದರೂ ಹುಟ್ಟಿದ ಶಬ್ಬಗಳು ಇದ್ದಿರಬಹುದೇ ಎಂಬ ಅಧ್ಯಯನವನ್ನೂ ವಿಜ್ಞಾನಿಗಳು ಮಾಡಬೇಕಿತ್ತು. ವಿವಿಧ ಕಾರಣಗಳಿಗಾಗಿ, ಸಂಶೋಧನೆಗಾಗಿ - ಜಗತ್ತಿನ ಅನೇಕ ದೇಶಗಳು ಅಂತರಾಳದಲ್ಲಿ ಬಿಟ್ಟ ಅನೇಕ ಉಪಗ್ರಹಗಳು ಅನೇಕ ಸಲ ವಿಫಲಗೊಂಡು ಧ್ವಂಸವಾದ ಮಣಗಟ್ಟಲೆ ಭಗ್ನಾವಶೇಷಗಳು ನಿರ್ವಾತ ಅಂಬರದಲ್ಲಿ ತೇಲುತ್ತಿದ್ದು, ಅವುಗಳ ಜೀವಂತ ಬಿಡಿಭಾಗಗಳು ಪ್ರಸರಿಸಿರಬಹುದಾದ ಕ್ಷೀಣ ಸೂಕ್ಷ್ಮ ಧ್ವಿನಿತಂತುಗಳು ಇವಿದ್ದಿರಬಹುದೇ ಎಂಬ ಅಂಶಗಳನ್ನು ಗಮನಿಸಿ ಸ್ಥೂಲ ಅಧ್ಯಯನಳನ್ನೂ ಮಾಡಲಾಯ್ತು. ಶೇನ್ ಸ್ಮಿತ್ ತನ್ನ ಸಹಕಾರಿಗಳೊಡಗೂಡಿ ಯಾವುದೇ ಮಾನವ ನಿರ್ಮಿತ ಯಂತ್ರಣಗಳಿಂದ ಈ ರೇಡಿಯೋ ಸಂದೇಶ ಬಂದುದಲ್ಲ ಎಂಬುವುದನ್ನು ಖಚಿತಪಡಿಸಿದ ಮೇಲೆ ಇದಕ್ಕೆ 'ಬಿ ಎಲ್ ಸಿ 1' (ಬ್ರೇಕ್ಥ್ರೂ ಲಿಸ್ಟನ್ ಕ್ಯಾಂಡಿಡೆಟ್ - Breakthrough Listen Candidate 1) ಎಂದು ನಾಮಕರಣ ಮಾಡಿದರು.
ಈ ರೇಡಿಯೋ ಸಂದೇಶ ಅಂತರಾಳದ ತಾರಾಸಮೂಹಗಳ ಪ್ರದೇಶದಿಂದ ಬಂದುವೆಂಬ ಆನಂದದಾಯಿ ಅಂಶ ಸಿದ್ದವಾದರೂ ಅದು ಅಲ್ಲಿನ ಸಜೀವಿಗಳಿಂದಲೇ ಬಂದುದೇ ಅಥವಾ ಯಾವುದೋ ಅನ್ಯ ಜೀವಿಗಳಿಂದ ಕಳುಹಿಸಲ್ಪಟ್ಟ ಸಂವಹನದ ಧ್ವನಿಸಂಜ್ಞೆಯ ಸಂದೇಶವೇ ಎಂಬುವುದನ್ನು ಈ ತನಕ ದೃಢೀಕರಿಸಲು ಸಾಕಷ್ಟು ಪುಷ್ಟಿ ಸಿಕ್ಕಿಲ್ಲ. ಈ ಎರಡೂ ಸಾಧ್ಯತೆಗಳ ಬಗೆಗೆ ಪರ-ವಿರೋಧಿ ಸಿದ್ಧಾಂತಗಳು ಮಂಡನೆಯಾಗಿವೆಯಾದರೂ, ಊಹಾಪೋಹಗಳ ನಡುವೆಯೇ ಅಂತರಿಕ್ಷ ಅಭ್ಯಾಸುಗಳ ದೊಡ್ಡ ವರ್ಗವೊಂದು, ಮುಂದೊಂದು ದಿನ ನಮ್ಮ ಭೂಜೀವಿಗಳ ಅಸ್ತಿತ್ವಕ್ಕೆ ಸವಾಲಾಗುವ, ಆಕ್ರಮಣ ಮಾಡುವ, ನಾಶಪಡಿಸುವ, (ಮಿತ್ರರೂ ಆಗಬಹುದಾದ) ಪರಗ್ರಹ ಜೀವಿಗಳು ಲಗ್ಗೆಯಿಡಬಹುದೆಂದಿದ್ದಾರೆ. ಹಾಗಾಗದಿರಲಿ.